ಕರ್ಕ್ ಪ್ಯಾಟ್ರಿಕ್, ವಿಲಿಯಂ: 1754-1812. ಈಸ್ಟ್‌ ಇಂಡಿಯ ಕಂಪನಿಯ ಸೇವೆಯಲ್ಲಿದ್ದ ಯೋಧ, ಆಡಳಿತಗಾರ. ಮದರಾಸು ಅಶ್ವದಳದಲ್ಲಿ ಕರ್ನಲ್ ಆಗಿದ್ದ ಜೇಮ್ಸ್‌ ಅವರ ಮಗನಾದ ಈತ 1773ರಲ್ಲಿ ಬಂಗಾಲ ಕಾಲ್ದಳದಲ್ಲಿ ಸೇನೆಗೆ ಸೇರಿ, ಲೆಫ್ಟಿನೆಂಟ್ ಕರ್ನಲ್ ಹುದ್ದೆಯವರೆಗೆ ಏರಿದ. ಪಾರಸೀ ಭಾಷೆ ಬಲ್ಲವನಾಗಿ ಮೂರನೆಯ ಮೈಸೂರು ಯುದ್ಧದ ಕಾಲದಲ್ಲಿ ಲಾರ್ಡ್ ಕಾರ್ನ್ವಾಲೀಸನ ದುಭಾಷಿಯಾಗಿ ಕೆಲಸ ಮಾಡಿದ. ಲಾರ್ಡ್ ಮಾರ್ನಿಂಗ್ಟನ್ನ ಸೇನಾ ಕಾರ್ಯದರ್ಶಿ (1798) ಹಾಗೂ ಆಪ್ತ ಕಾರ್ಯದರ್ಶಿ (1799) ಹುದ್ದೆ ನಿರ್ವಹಿಸಿದ. ಟಿಪ್ಪುವಿನ ಪತನಾನಂತರ ಮೈಸೂರು ವಿಭಜನೆಯ ಒಪ್ಪಂದವನ್ನು ರೂಪಿಸಲು ಜನರಲ್ ಹ್ಯಾರಿಸ್, ಕರ್ನಲ್ ಆರ್ಥರ್ ವೆಲ್ಲೆಸ್ಲಿ, ಹೆನ್ರಿ ವೆಲ್ಲೆಸ್ಲಿ, ಬ್ಯಾರಿ ಕ್ಲೋಸ್ ಮತ್ತು ಈತನನ್ನು ಒಳಗೊಂಡ ಕಮಿಷನ್ ನೇಮಿಸಿದ್ದು, ಅದಕ್ಕೆ ಸಹಿ ಹಾಕಿದ್ದ ಕಂಪನಿಯ ಪ್ರತಿನಿಧಿಗಳಲ್ಲಿ ಈತನೂ ಒಬ್ಬ. ಮುಂದೆ ಈತನನ್ನು ಪುಣೆಯ ರೆಸಿಡೆಂಟನಾಗಿ ನೇಮಿಸಲಾಗಿತ್ತು. ಭಾರತೀಯ ಭಾಷೆ ಮತ್ತು ಸಾಹಿತ್ಯಗಳನ್ನು ಚೆನ್ನಾಗಿ ಬಲ್ಲವನಾದ ಈತ ಟಿಪ್ಪುವಿನ 1786ರವರೆಗಿನ ಪಾರಸೀ ಪತ್ರಗಳನ್ನು ಭಾಷಾಂತರಿಸಿ, 1811ರಲ್ಲಿ ಲಂಡನಿನಿಂದ ಸೆಲೆಕ್ಟ್‌ ಲೆಟರ್ಸ್ ಆಫ್ ಟಿಪ್ಪುಸುಲ್ತಾನ್ ಎಂಬ ಹೆಸರಿನಲ್ಲಿ ಪ್ರಕಟಿಸಿದ.
ಈತನ ಸೋದರ ಜೇಮ್ಸ್‌ ಅಕಿಲಿಸ್ ಕರ್ಕ್ಪ್ಯಾಟ್ರಿಕ್ (1764-1805) 1791-92ರ ಮೈಸೂರು ಯುದ್ಧದಲ್ಲಿ ಪಾಲುಗೊಂಡಿದ್ದ. 1799ರ ಯುದ್ಧದಲ್ಲಿ ಟಿಪ್ಪುವಿನ ವಿರುದ್ಧ ನಿಜಾಮನ ಸೇನೆಯನ್ನು ತಂದು ಭಾಗವಹಿಸಿದ್ದ. 	(ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ